ಕಾನೂನು - ಸಬಲೀಕರಣದ ಪ್ರಬಲ ಸಾಧನ
- teamdhwani
- Jun 3
- 2 min read
ಪುರುಷೋತ್ತಮ, ವಕೀಲರು

ನಾನು ಸ್ವಭಾವತಃ ಸಂಕೋಚ ಸ್ವಭಾವದವನಾಗಿದ್ದರು ಸಹ, ಅನುಭವಿಸಿದಂತಹ ಅವಮಾನ, ನಿಂದನೆ, ತೆಗಳಿಕೆಯ ಮಾತುಗಳು ನನ್ನ ಸುತ್ತ ನಡೆಯುತ್ತಿದ್ದ ಘಟನೆಗಳು ನನ್ನನ್ನು ಸದಾ ಅಣಕಿಸುತ್ತಿತ್ತು. ನನ್ನ ಮೇಲೆ ಎಷ್ಟೇ ಜವಾಬ್ದಾರಿಗಳು ಇದ್ದರೂ ಸಹ ನನ್ನ ಸುತ್ತ ಮುತ್ತ ಅಮಾಯಕರಿಗೆ, ಅಸಹಾಯಕರಿಗೆ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ಧ ಹೋರಾಡಬೇಕು ಎಂಬ ಹಂಬಲ ಹೆಚ್ಚುತ್ತಾ ಹೋಯಿತು.
ಕಾನೂನಿನ ಅರಿವಿಲ್ಲದ ನನಗೆ ಅನೇಕ ಬಾರಿ ಕಾನೂನಿನ ಅಗತ್ಯ ಬಿದ್ದಾಗಲೂ ಸಹ ನಾನು ವಕೀಲನಾಗುತ್ತೇನೆ ಎಂಬ ಪರಿಕಲ್ಪನೆ ಇರಲಿಲ್ಲ. ಆದರೆ ಅನಿರೀಕ್ಷಿತವಾಗಿ ವಕೀಲನಾದ ನನಗೆ ನನ್ನಂತೆಯೇ ಅವಕಾಶಗಳ ಕೊರತೆ ಅನುಭವಿಸಿದವರಿಗೆ ಕಾನೂನಿನ ಅರಿವನ್ನು ಮೂಡಿಸುವ ತುಡಿತ ಹೆಚ್ಚಿಕೊಂಡಿತು. ನಂತರ ನಾನು ಸಮಾಜವನ್ನು ನೋಡುವ ರೀತಿ ಬದಲಾಯಿತು. ಅಗತ್ಯ ಬಿದ್ದಾಗ ಕಾನೂನಿನ ಅರಿವು ಎಷ್ಟು ಮಹತ್ವವಾದದ್ದು ಎಂದು ದೌರ್ಜನ್ಯಕ್ಕೆ ಒಳಗಾದವರಿಗೆ ಕಾನೂನಿನ ಅರಿವು ಮೂಡಿಸಿ ಅಂತವರಿಗೆ ಕಾನೂನಿನ ನೆರವನ್ನು ನೀಡಬೇಕು ಎಂಬ ಧ್ಯೇಯವನ್ನು ಇಟ್ಟುಕೊಂಡು ಈ ವೃತ್ತಿಗೆ ಕಾಲಿಟ್ಟೆ.
ನಾನು ವಕೀಲಿಕೆ ಪ್ರಾರಂಭಿಸಿದ ಆರಂಭದಲ್ಲಿ ನಾನು ಅಂದುಕೊಂಡಂತೆ ನ್ಯಾಯಾಂಗ ಪ್ರಕ್ರಿಯೆ ಇರಲಿಲ್ಲ. ಇದರ ಆಗು-ಹೋಗುಗಳನ್ನು ಅರಿಯಲು ನನಗೆ ತುಂಬಾ ಸಮಯ ಹಿಡಿಯಿತು. ನನ್ನ ಜವಾಬ್ದಾರಿಯ ಜೊತೆಗೆ ಅಗತ್ಯವಿರುವರಿಗೆ ಕಾನೂನಿನ ನೆರವು ನೀಡಬೇಕೆಂಬ ನನ್ನ ದ್ಯೇಯ ಈಡೇರುತ್ತಿಲ್ಲ ಎಂಬ ಕೊರಗು ಕಾಡುತಿತ್ತು. ಒಂದು ಅವಕಾಶ ನನ್ನ ವೃತ್ತಿ ಜೀವನ ಬದಲಾಯಿತು.
ನಾನು ಅವಕಾಶಕ್ಕಾಗಿ ಕಾಯುತ್ತಿರುವಾಗ ನನಗೆ ಸಿಕ್ಕಿದ್ದು ಧ್ವನಿ ಲೀಗಲ್ ಟ್ರಸ್ಟ್. ಧ್ವನಿಯ ಉದ್ದೇಶಗಳು ಮತ್ತು ಕಾರ್ಯ ವೈಖರಿ ಬಗ್ಗೆ ತಿಳಿದುಕೊಂಡಾಗ ನನ್ನಲ್ಲಿದ್ದ ಉದ್ದೇಶಗಳು ಚಿಗುರೊಡೆಯಿತು ಮತ್ತು ನಾನು ಈ ವೃತ್ತಿಗೆ ಬರುವಾಗಿದ್ದಂತಹ ಆಶಯಗಳು ಧ್ವನಿಯೊಂದಿಗೆ ಈಡೇರುತ್ತದೆ ಎಂದು ಉತ್ಸಾಹದಿಂದ ಧ್ವನಿಯ ಜೊತೆಗೂಡಿ ಕೆಲಸವನ್ನು ಪ್ರಾರಂಭಿಸಿದೆ.
ನಾನು ಧ್ವನಿ ಲೀಗಲ್ ಟ್ರಸ್ಟ್ ನ ಸದಸ್ಯನಾಗಿ ಕಳೆದ ಮೂರುವರೆ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ಈ ಸಂಸ್ಥೆಯ ಉದ್ದೇಶಗಳಿಗೆ ನನ್ನ ವೃತ್ತಿಯನ್ನು ಬಳಸಿಕೊಳ್ಳುತ್ತಿರುವುದು ನನಗೆ ಹೆಮ್ಮೆ ಎನ್ನಿಸುತ್ತಿದೆ. ಈ ಸಂಸ್ಥೆಯ ಮುಖಾಂತರ ಹಲವಾರು ಅಮಾಯಕ ಹಾಗೆಯೇ ಅಸಹಾಯಕರಿಗೆ ನ್ಯಾಯ ಕೊಡಿಸಲು ಕಾನೂನು ಹೋರಾಟ ಮಾಡುತ್ತಿರುವುದು ವಯಕ್ತಿಕವಾಗಿ ನನಗೆ ವೃತ್ತಿಪರ ತೃಪ್ತಿ ದೊರಕಿದೆ ಎಂದು ಹೇಳಲು ಬಯಸುತ್ತೇನೆ.
ಒಬ್ಬ ಮಹಿಳೆ ತನ್ನ ವೈವಾಹಿಕ ಜೀವನದಲ್ಲಿ ಅನುಭವಿಸಿದಂತಹ ಹಿಂಸೆ ದೌರ್ಜನ್ಯದ ವಿರುದ್ಧ ಹೋರಾಡಲು ಈ ಸಂಸ್ಥೆಯ ಮೂಲಕ ಅಂತಹವರಿಗೆ ನ್ಯಾಯ ಒದಗಿಸುವ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆ ಎನಿಸುತ್ತದೆ. ನಮ್ಮಲ್ಲಿ ಬರುವಂತಹ ಕಕ್ಷಿದಾರರು ತಮ್ಮ ಆತಂಕವನ್ನು ನಮ್ಮಲ್ಲಿ ಹೇಳಿಕೊಂಡಾಗ ನಾವು ಅವರಿಗೆ ನೀಡುವ ಸಲಹೆ ಮತ್ತು ಕಾನೂನಿನಲ್ಲಿ ಅದಕ್ಕಿರುವ ಅವಕಾಶಗಳನ್ನು ಅವರಿಗೆ ತಿಳಿಸುವ ಮೂಲಕ ಅವರಿಗೆ ಧೈರ್ಯ ತುಂಬುವುದು ನನಗೆ ತುಂಬಾ ಸಂತೋಷ ಎನಿಸುವುದರ ಜೊತೆಗೆ ಕಾನೂನಿನ ಅರಿವನ್ನು ಅವರ ಮೂಲಕ ವಿಸ್ತರಿಸುವ ಅವಕಾಶ ಈ ಸಂಸ್ಥೆಯಿಂದ ನನಗೆ ಒದಗಿ ಬಂದಿರುವುದು ನನಗೆ ಈ ಸಂಸ್ಥೆಯ ಬಗ್ಗೆ ಇರುವ ಹೆಮ್ಮೆ ಇಮ್ಮಡಿಗೊಳಿಸುತ್ತದೆ.
ನಮ್ಮ ಧ್ವನಿ ಸಂಸ್ಥೆಯ ಕಾರ್ಯಕ್ಷೇತ್ರವಿಸ್ತಾರ ಮಾಡುವುದುನನ್ನ ಕನಸಾಗಿದೆ. ಇನ್ನು ಕೆಲವೇವರ್ಷಗಳಲ್ಲಿ ಧ್ವನಿಯಅಂಗ ಸಂಸ್ಥೆಗಳುರಾಜ್ಯದ ಕೆಲವು ಭಾಗಗಳಲ್ಲಿ ಸ್ಥಾಪಿಸಿಅದರ ಜವಾಬ್ದಾರಿಯನ್ನುನಾನು ನಿಭಾಯಿಸುವ, ಮುಖ್ಯಸ್ಥನಾಗುವುದು ನನ್ನ ಕನಸಾಗಿದೆ. ಈ ರೀತಿಯಾಗಿ, ಹಿಂಸೆ ಮತ್ತು ತಾರತಮ್ಯವನ್ನು ಎದುರಿಸುತ್ತಿರುವ ಎಲ್ಲಾ ವ್ಯಕ್ತಿಗಳಿಗೂ Access to Justice ವಾಸ್ತವವಾಗಬೇಕೆಂದು ನಾನು ಆಶಿಸುತ್ತೇನೆ.




Comments