top of page

ನ್ಯಾಯದ ದಾರಿಯಿಂದ ಸಾಮಾಜಿಕ ನ್ಯಾಯದ ಕಡೆಗೆ...

Updated: May 23

ಅಡ್ವೊಕೇಟ್‌ ಶಶಿಧರ ಎನ್.



ಕಾನೂನು ಮತ್ತು ನ್ಯಾಯ , ಸತ್ಯ ಮತ್ತು ನಿಜ ನೋಡಲು ಒಂದೇ ಅನಿಸಿದರೂ ಅದು ವಿಭಿನ್ನ.

ಏಕೆ?, ಸರ್ಕಾರಗಳು ಏಕೆ ಬರೀ ಮಹಿಳೆಯರ ಸಂರಕ್ಷಣೆಗೆ ಕಾನೂನು ರೂಪಿಸುತ್ತವೆ? ಪುರುಷರ ರಕ್ಷಣೆಗೆ ಕಾನೂನು ಯಾಕಿಲ್ಲ? ಇದು ನಮ್ಮ ಪುರುಷರ ಆಂಬೊಣ. ಇದಕ್ಕೆ ಉತ್ತರ ಮುಂದೆ ಇದೆ.


"ಸಾರ್, ನಂಗೆ ಒಂದು ರೂಪಾಯಿ ಕೂಡ ಬೇಡ, ನಂಗೆ ಬಿಡುಗಡೆ ಕೊಡಿಸಿ ಸಾಕು, ಸಾರ್, ನಂಗೆ ಏನೂ ಬೇಡ ನನ್ ಮಕ್ಕಳಿಗೆ ಮೆಂಟೆನೆನ್ಸ್ ಕೊಡ್ಸಿ, ಸಾರ್, ನನಗೆ ಡಿವೋರ್ಸ ಬೇಡ, ನಂಗೆ ಅವರಂದರೆ ಈಗಲೂ ಇಷ್ಟ, ಅವ್ರು ನನ್ನ ಹೊಡಿಬಾರದು ಆತರ ಏನಾದರೂ ಪ್ರೊಟೆಕ್ಷನ್ ಕೊಡಿ." ಈ ಪದಗಳು ನನ್ನವಲ್ಲ, ಸ್ವತಃ, ಕೌಟುಂಬಿಕ ದೌರ್ಜನ್ಯದಿಂದ ನೊಂದ ಹೆಣ್ಣುಮಕ್ಕಳು ನನಗೆ ಈ ರೀತಿ ಹೇಳಿದ್ದಾರೆ.


ಹೈವೇ ಟೋಲ್ ಪಕ್ಕದಲ್ಲಿ ಟೀ ಅಂಗಡಿ, ಎಗ್ ರೈಸ್ ಅಂಗಡಿ ಇಟ್ಟೋರಲ್ಲಿ ಸುಮಾರು ಜನ ಕುಡುಕ ಗಂಡನಿಂದ ಬೇಸತ್ತು / ಗಂಡ ಸತ್ತ ಮೇಲೆ ದಿಕ್ಕು ತೋಚದೆ ಕ್ರೂರ ಸಮಾಜವನ್ನು ಎದುರಿಸಿ ನಿಂತವರೇ ಹೆಚ್ಚು.


ನನಗ್ಯಾಕೆ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳು ಬಹಳ ಕಾಡುತ್ತವೆ?


ಏಕೆಂದರೆ, ನಾನು ಪದವಿ ತನಕ ಓದಿದ್ದು , ಬೆಳೆದದ್ದು ಹಳ್ಳಿಯಲ್ಲಿ. ನಾನು ನಮ್ಮ ಹಳ್ಳಿಯಲ್ಲಿ, ನೆರೆಹೊರೆಯಲ್ಲಿ ನಡೆಯುವ ಕೌಟುಂಬಿಕ ದೌರ್ಜನ್ಯಗಳನ್ನು ಹತ್ತಿರದಿಂದ ನೋಡಿದ್ದೇನೆ. ಅಲ್ಲಿ ನಾ ಕಂಡಂತೆ, ಯಾವತ್ತೂ, ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಸಿಕ್ಕಿಲ್ಲ. ಮೊದಲು ಹೆಣ್ಣು ಸಹಿಸಿಕೊಳ್ಳುತ್ತಾಳೆ, ಎರಡನೇ ಸಲ ಕುಟುಂಬಸ್ಥರು ರಾಜೀ-ಸಂದಾನ ಮಾಡುತ್ತಾರೆ. ಅಲ್ಲೂ ಅವಳಿಗೆ ನ್ಯಾಯ ಸಿಕ್ಕಿಲ್ಲ ಅಂದ್ರೆ ಅವಳು ನೇರವಾಗಿ ಪೊಲೀಸ್ ಸ್ಟೇಷನ್ ಗೆ ಹೋಗುತ್ತಾಳೆ. ಈ ಮೂರು ಕಡೆಗಳಲ್ಲೂ ಸಹ ಗಂಡಿನ ಪ್ರಾಬಲ್ಯ ಹೆಚ್ಚಿರುತ್ತದೆ. ಎಲ್ಲಾ ಕಡೆ ಹೇಳೋದು ಒಂದೇ ಹೆಣ್ಣು ಆದೋಳು ನೀನು ಸಹಿಸಿಕೊಂಡು ಹೋಗಬೇಕಮ್ಮ, ಮಕ್ಕಳ ಮುಖ ನೋಡು ಅಂತ. ಯಾಕೇ, ಗಂಡು ಮಕ್ಕಳ ಮುಖ ನೋಡಬಾರದ...? ನಾನು ಒಂದು ಕಡೆ ಗಮನಿಸಿದ್ದೇನೆ ಒಂದು ಹೆಣ್ಣು ತನ್ನ ಗಂಡನ ಎರಡನೇ ಸಂಬಂದದ ಬಗ್ಗೆ ಪಂಚಾಯಿತಿ ನಡೆಸಲು ಬಂದಾಗ ಅಲ್ಲಿದ್ದ ಪಂಚಾಯಿತಿದಾರರಲ್ಲಿ ಒಬ್ಬರಿಗೆ ಎರಡು ಮದುವೆ ಆಗಿ ಒಂದು ಬೇರೆ ಸಂಬಂಧ ಕೂಡ ಇತ್ತು. ನನಗೆ ಆ ಪಂಚಾಯಿತಿದಾರನ ತೀರ್ಪಿನ ಬಗ್ಗೆ ಅನುಮಾನ ಹುಟ್ಟಿಸಿತ್ತು.


ಈ ಮೂರು ಹಂತಗಳಲ್ಲಿ ನ್ಯಾಯ ಸಿಗೊಲ್ಲ ಅಂತ ಗೊತ್ತಾದಾಗ ಆ ಹೆಣ್ಣು ಕೌಟುಂಬಿಕ ದೌರ್ಜನ್ಯವನ್ನು ಮೂಕಿಯಂತೆ ಸಹಿಸಿಕೊಂಡು ಜೀವನ ನಡೆಸುತ್ತಾಳೆ. ಇದೇ ಕಾರಣಕ್ಕೆ ನನಗೆ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳು ಬಹಳ ಕಾಡೋದು.


ನಾನ್ಯಾಕೆ ಲಾಯರ್ ಆದೆ ?


ಈ ಪ್ರಶ್ನೆಗೆ ನನ್ನ ತಲೆಯಲ್ಲಿ ಯಾವಾಗಲೋ ಉತ್ತರ ಹುಡುಕುತ್ತಾ ಇರುತ್ತದೆ. ಅದಕ್ಕೆ ಹಲವಾರು ಕಾರಣ ಇರಬಹುದು. ಆದರೆ ನನ್ನ ಬಾಲ್ಯ ನೆನೆಸಿಕೊಂಡಾಗ ಲಾಯರ್ ಆದ ಕಾರಣ ಇದೇ ಇರಬಹುದಾ? ಅನ್ನಿಸುತ್ತೆ. ನಮ್ಮ ಅಮ್ಮ ಒಂದ್ಸಲ ಹೇಳ್ತಾ ಇದ್ರು ನಾನು ಚಿಕ್ಕವನಿದ್ದಾಗ ಒಬ್ಬ ಕುಡುಕ ಅಜ್ಜನಿಗೆ ಹೇಳ್ತಾ ಇದ್ನಂತೆ, “ನಾನು ಪೊಲೀಸ್ ಆಗಿ ನಿಮ್ಮನ್ನೆಲ್ಲಾ ಒದ್ದು ಜೈಲಿಗೆ ಹಾಕ್ತಿನಿ ಅಂತ “.


ಇನ್ನೂ ಒಂದು ನೆನಪು ನನ್ನ ಕಾಡುತ್ತೆ. ನಾನು ಲಾಯರ್ ಪಾತ್ರ ಇರೋ ಅಂತಹ ಸಿನಿಮಾಗಳನ್ನು ನೋಡಿದಾಗ ಅದರಲ್ಲಿ ಆ ಹೀರೋ ಬಡವರಿಗೆ, ನೊಂದವರಿಗೆ ಅವನ ಕಾನೂನು ಜ್ಞಾನದ ಮೂಲಕ ಪರಿಹಾರ ಕೊಡಿಸುವುದು ನಂಗೆ ತುಂಬಾ ಇಷ್ಟ ಆಗ್ತಾ ಇತ್ತು. ನಾನು ಲಾಯರ್ ಆಗ್ತೀನಿ ಅಂದುಕೊಂಡ ದಿನಗಳೂ ಇದ್ದಾವೆ. ಬಹುಶಃ ಇದೇ ಕಾರಣಕ್ಕೆ ಅನ್ಸತ್ತೆ ನನ್ನ ಮನಸ್ಸುನ್ಯಾಯದಿಂದ ಸಾಮಾಜಿಕ ನ್ಯಾಯದ ಕಡೆಗೆ ವಾಲಿದ್ದು. ಬರು ಬರುತ್ತಾ ಆ ನನ್ನ ಆಸೆ / ಕನಸುಗಳು ಮಾರ್ಗದರ್ಶನದ ಕೊರತೆಯಿಂದ ದೂರ ಆಗಿದ್ದವು.


ನನ್ನ ಮನಸ್ಸು ಯಾವ ಕೆಲಸದಲ್ಲೂ ತೃಪ್ತಿ ನೀಡಿರಲಿಲ್ಲ. ಆದರೆ ಈಗ ನನ್ನ ಈ ವೃತ್ತಿ ನನಗೆ ತೃಪ್ತಿ ಅಲ್ಲ... ಅಲ್ಲ.. ಸಂತೃಪ್ತಿ ನೀಡುತ್ತಿದೆ. ಇದರಲ್ಲೂ ಅಡೆತಡೆಗಳು ಇರುವುದು ನಿಜ.


ನಾನು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವಾಗ ಹೊಸತನ್ನು ಕಲಿಯುತ್ತಿಲ್ಲ ಅನ್ನೋ ಕೊರತೆ ಇತ್ತು. ನಾನು ಚಿಕ್ಕದಾದ ವ್ಯಾಪಾರ ಶುರು ಮಾಡಿದಾಗ ದಳ್ಳಾಳಿಗಳು ರೈತರಿಂದ 7% ಕಮಿಷನ್ ವಸೂಲಿ ಮಾಡುವುದು ನನಗೆ ಬೇಜಾರು ಆಯಿತು. ನ್ಯಾಯ ಕೊಡಿಸಲು ವಕೀಲಿ ವೃತ್ತಿಯೇ ಸರಿ ಎಂದು ನಾನು ಈ ವೃತ್ತಿಯನ್ನು ಆರಿಸಿಕೊಂಡೆ. ಈಗ ನ್ಯಾಯಾಂಗದಲ್ಲೂ ಮತ್ತು ವ್ಯವಸ್ಥೆಯಲ್ಲೂ ಹುಳುಕಿರುವುದು ಬಹಳ ಬೇಸರದ ಸಂಗತಿ.


ಧ್ವನಿಯ ದನಿ


ನನಗೆ ಸರಿಯಾದ ಸಮಯದಲ್ಲಿ ಧ್ವನಿ (ಧ್ವನಿ ಲೀಗಲ್ ಟ್ರಸ್ಟ್) ಜೊತೆ ಕೆಲಸ ಮಾಡೋ ಅವಕಾಶ ಒದಗಿ ಬಂತು. ಮನೆ, ಆಫೀಸು ನಿಭಾಯಿಸೋದು ಸಂಗಾತಿಯ ನೆರವಿಲ್ಲದೆ ಕಷ್ಟ ಸಾಧ್ಯ. ಪುಣ್ಯಕ್ಕೆ ನನಗದರ ಕೊರತೆ ಇಲ್ಲ. ಬೆಳಗ್ಗೆ ಎದ್ದೇಳೋದು, ಸ್ವಲ್ಪ ಹೊತ್ತು ಮಗನ ಜೊತೆ ಆಟ, ಆಮೇಲೆ ರೆಡಿ ಆಗಿ ಆಫೀಸಿಗೆ ಬರೋದು. ರಾತ್ರಿ ಆಫೀಸ್ ಇಂದ ಮನೆಗೆ ಹೋಗಿ ಮಲಗುವುದು ಅಥವಾ ಓದುವುದು ಇದು ನನ್ನ ದೈನಂದಿನ ದಿನಚರಿ.


ನಾನು ಧ್ವನಿಯಲ್ಲಿ ಮಹಿಳಾ ಪೊಲೀಸ್ ಸ್ಟೇಷನ್ ಗಳಿಗೆ ಪರಿಹಾರ ಕಾರ್ಯಕ್ರಮದ ಸಹಯೋಗದಲ್ಲಿ ಭೇಟಿ ನೀಡಿ, ನೊಂದ ಮಹಿಳೆಯರಿಗೆ ಕಾನೂನು ಸಮಾಲೋಚನೆ ನಡೆಸುತ್ತೇನೆ. ಕಾನೂನಿನ ಅಡಿಯಲ್ಲಿ ಲಭ್ಯ ಇರುವ ಪರಿಹಾರಗಳನ್ನು ಅವರಿಗೆ ತಿಳಿಸಿ ಹೇಳುತ್ತೇನೆ. ಅವರು ಪ್ರಕರಣ ದಾಖಲು ಮಾಡಲು ಬಯಸಿದರೆ ಅವರ ಜೊತೆ ಚರ್ಚೆ ನಡೆಸಿ ಅವರ ಪ್ರಕರಣವನ್ನು ಉಚಿತವಾಗಿ ನ್ಯಾಯಾಲಯದಲ್ಲಿ ನಡೆಸುತ್ತೇವೆ. ಪ್ರಕರಣದ ಇತರೆ ಕೆಲಸಗಳು ಅಂದರೆ ನೋಟಿಸ್ ಜಾರಿಗೊಳಿಸಲು ಸಹಾಯ ಮಾಡುವುದು. ಸರ್ಟಿಫೈಡ್ (ಪ್ರಮಾಣೀಕೃತ ) ದಾಖಲೆಗಳನ್ನು ಪಡೆದುಕೊಂಡು ಅವರಿಗೆ ತಿಳಿಸುವುದು ಮತ್ತು ಅವರ ಪ್ರಕರಣದ ಸ್ಥಿತಿಯ ಬಗ್ಗೆ ಅವರಿಗೆ ತಿಳಿಸುತ್ತೇನೆ ಮತ್ತು ಅವರ ಪರ ವಾದ ಮಾಡುವುದು. ಅವಶ್ಯಕ ಎನಿಸಿದರೆ ಹೈಕೋರ್ಟ್ ನಲ್ಲಿ ಕೇಸ್ ದಾಖಲಿಸುವುದು.


ನಾನು ಉಚಿತ ಕಾನೂನು ಶಿಬಿರಗಳನ್ನು ಏರ್ಪಡಿಸಲು ನೆರವಾಗುವುದು ಮತ್ತು ನೊಂದವರಿಗೆ ಮತ್ತು ತಳ ಸಮುದಾಯದವರಿಗೆ ಉಚಿತ ಕಾನೂನು ಸಲಹೆ ನೀಡುತ್ತೇನೆ. ಪ್ರಾತಿನಿಧ್ಯ ವಂಚಿತರಿಗೆ ಪ್ರಾತಿನಿಧ್ಯ ನೀಡುವುದು ಅವಶ್ಯಕ ಎಂದು ನಾನು ಬಯಸುತ್ತೇನೆ.



Comments


bottom of page